ಹೋಪ್, ಗ್ರಾಂಟ್ ಜೇಮ್ಸ್
	1808-75. ಪ್ರಸಿದ್ಧ ಬ್ರಿಟಿಷ್ ಸೇನಾಧಿಪತಿ. 1808 ಜುಲೈ 22ರಂದು ಜನಿಸಿದ. ಎಡಿನ್‍ಬರೊ ಮತ್ತು ಸ್ವಿಜರ್‍ಲ್ಯಾಂಡ್‍ನಲ್ಲಿ ಶಿಕ್ಷಣವನ್ನು ಪಡೆದ. ಅನಂತರ ಸೈನ್ಯಕ್ಕೆ ಸೇರಿದ ಇವನು ಚಿಕ್ಕ ವಯಸ್ಸಿನಲ್ಲಿ ಮೇಜರ್‍ಜನರಲ್ ಪದವಿಗೇರಿದ(1858). ಅಸಾಧಾರಣ ಸೇನಾನಿಯಾದ ಇವನು ಪಿಟೀಲು ವಾದನದಲ್ಲೂ ಪ್ರಾವೀಣ್ಯಪಡೆದಿದ್ದ. ಒಂದನೆಯ ಚೀನಾಯುದ್ಧ ಸಂದರ್ಭದಲ್ಲಿ ಲಾರ್ಟ್ ಸಲ್‍ಟಾನ್ ಎಂಬ ಬ್ರಿಟಿಷ್ ಮೇಜರ್ ಜನರಲ್ಲನೂ ಸಂಗೀತಪ್ರಿಯನಾ ಗಿದ್ದು, ಅವನು ತನ್ನ ಅಭಿರುಚಿಗೆ ಯೋಗ್ಯ ಬ್ರಿಗೇಡಿಯರ್ ಮೇಜರ್‍ನನ್ನು ಹುಡುಕುತ್ತಲಿದ್ದಾಗ ಇವನನ್ನು ಆಯ್ಕೆ ಮಾಡಿಕೊಂಡ. ಇವನು ಸುದೀರ್ಘ ಸಮುದ್ರಯಾನದ ಬೇಸರಿಕೆ ಕಳೆಯುವಲ್ಲಿ ಒಳ್ಳೆಯ ಜೊತೆಗಾರನಾಗಿದ್ದು ಮಾತ್ರವಲ್ಲದೆ ಒಳ್ಳೆಯ ಸೇನಾನಿಯೂ ಆಗಿದ್ದರಿಂದ ಉನ್ನತ ಹುದ್ದೆಗೆ ಆಯ್ಕೆಯಾದ. ಅನಂತರ ದಂಡನಾಯಕನಾದ(1842). ಇವನು ಯುದ್ಧದಲ್ಲಿ ತೋರಿಸಿದ ಸಾಹಸ ಕಾರ್ಯವನ್ನು ಗುರುತಿಸಿ ಕಂಪ್ಯಾನಿಯನ್ ಆಫ್ ದಬಾತ್ ಎಂದು ಗೌರವಿಸಲಾಯಿತು. ಇವನು ಸೈನಿಕ ಜೀವನದ ಹೆಚ್ಚುಕಾಲವನ್ನು ಚೀನ ಮತ್ತು ಭಾರತದಲ್ಲಿ ನಡೆದ ಯುದ್ಧಗಳಲ್ಲಿ ಕಳೆದ. ಚೀನ ಯುದ್ಧದ ಅನಂತರ ಇವನು ಭಾರತಕ್ಕೆ ಹೊರಟಿದ್ದ ಬ್ರಿಟಿಷ್ ಪಡೆಯನ್ನು ಸೇರಿಕೊಂಡ(1844). ಇವನು ಭಾರತದಲ್ಲಿ ತನ್ನ ಸೈನಿಕ ಸೇವೆಯನ್ನು ಸಟ್ಲೆಜ್ ಯುದ್ಧದಿಂದ ಪ್ರಾರಂಭಿಸಿದ (1845-46). ಸೊಬ್ರಾನಿನಲ್ಲಿ ಸಂಭವಿಸಿದ ದುಸ್ತರ ಕಾಳಗದಲ್ಲಿ ಇವನು ತೋರಿಸಿದ ಸಾಹಸ ಸ್ತುತ್ಯಾರ್ಹವಾದುದು. 1848-49ರಲ್ಲಿ ಪಂಜಾಬಿನ ಪ್ರದೇಶದಲ್ಲಿ ನಡೆದ ಯುದ್ಧಗಳ ನೇತೃತ್ವವನ್ನು ಈತ ವಹಿಸಿದ. ರಾಮನಗರದ ಚೀನಾಬ್ ಮುಖಜ ಪ್ರದೇಶ, ಜಲಿಯನ್‍ವಾಲಾಬಾಗ್ ಮತ್ತು ಗುಜರಾತಿನಲ್ಲಿ ನಡೆದ ಹೋರಾಟಗಳಲ್ಲಿ ಇವನು ಮುಖ್ಯ ಪಾತ್ರ ವಹಿಸಿದ್ದ. ಈ ಎಲ್ಲ ಸಾಹಸಗಳಿಂದ ಇವನು ಲೆಫ್ಟಿನೆಂಟ್ ಕರ್ನಲ್ ಹುದ್ದೆಪಡೆದು, ಅನಂತರ ಸೈನ್ಯದ ಕಮಾಂಡರ್ ಆದ. ಇವನು ವೀರಯೋಧನಾಗಿದ್ದಂತೆ ನ್ಯಾಯನಿಷ್ಠ ನೇತಾರನೂ ಆಗಿದ್ದ. 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಮರದ ಸಂದರ್ಭದಲ್ಲಿ ಅಂಬಾಲದಲ್ಲಿದ್ದ ಇವನು ದಂಗೆಯನ್ನು ಸದೆಬಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ. ದೆಹಲಿಯ ಸುತ್ತುಮುತ್ತಲಿನ ಪ್ರದೇಶದಲ್ಲಿ ಈತ ಕಳೆದ ನಾಲ್ಕು ತಿಂಗಳ ಸೈನಿಕ ಜೀವನ ಇವನ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಕುಂದಿಸಿತು. ತನ್ನ ಸೈನ್ಯಕ್ಕಿಂತ ದುಪ್ಪಟ್ಟು ದೊಡ್ಡದಾದ ಭಾರತೀಯ ಸೈನ್ಯದ ವಿರುದ್ಧ ಹಗಲಿರುಳು ಹೋರಾಡುವಾಗ ಇವನ ಪದಾತಿದಳ ಒಂದೇ ಸಮನೆ ಕ್ಷೀಣಿಸುತ್ತ ಹೋಯಿತು. ಇಷ್ಟಾದರೂ ಈ ಸಮರದಲ್ಲಿ ಬ್ರಿಟಿಷರ ಪರ ಇವನು ಮೆರೆದ ಧೈರ್ಯಕ್ಕೆ ನೈಟ್ ಕಮಾಂಡರ್ ಆಫ್ ದಬಾತ್ ಎಂದು ಗೌರವಿಸಲಾಯಿತು(1858).

	1860ರಲ್ಲಿ ಇವನು ಕಲ್ಕತ್ತದಿಂದ ಹಾಂಕಾಂಗ್‍ಗೆ ಸಮುದ್ರಯಾನ ಮಾಡಿ ಫ್ರೆಂಚ್ ಮೈತ್ರಿಯೊಡನೆ ಚೀನದ ವಿರುದ್ಧ ಮೂರು ತಿಂಗಳ ಕಾಲ ಹೋರಾಡಿ ಅವರನ್ನು ಸೋಲಿಸಿದ. ಇವನ ನೇತೃತ್ವದಲ್ಲಿ ನಡೆದ ಈ ಯುದ್ಧ ಇಂಗ್ಲೆಂಡ್ ಕೈಗೊಂಡ ಯುದ್ಧಗಳಲ್ಲೆಲ್ಲ ಅತ್ಯಂತ ಯಶಸ್ವಿ ಸಮರವೆಂದು ಪ್ರಪಂಚ ಪ್ರಸಿದ್ಧವಾಗಿದೆ. ಈ ಮಧ್ಯೆ ಫ್ರೆಂಚರೊಡನೆ ಮಾಡಿಕೊಂಡ ಮೈತ್ರಿ, ಚೀನದ ವಿರೋಧಕ್ಕಿಂತ ತೀವ್ರ ಅಡ್ಡಿಯನ್ನುಂಟು ಮಾಡಿತು. ಆದರೆ ಇವನ ನಿಷ್ಠೆ ಮತ್ತು ದೃಢ ನಿರ್ಧಾರದ ಮುಂದೆ ಈ ತಾತ್ಕಾಲಿಕ ಸಮಸ್ಯೆಗಳೆಲ್ಲ ನಿವಾರಣೆಯಾದವು. ಇವನ ಅಪ್ರತಿಮ ಸಾಹಸವನ್ನು ಪರಿಗಣಿಸಿ ಗೌರವದಿಂದ ಜಿ.ಸಿ.ಬಿ. ಎಂದು ಪುರಸ್ಕರಿಸ ಲಾಯಿತು. ಚೀನದಿಂದ ಭಾರತಕ್ಕೆ ಬಂದ ಅನಂತರ ಇವನನ್ನು ಮದರಾಸು ಸೈನ್ಯಪಡೆಯ ಕಮಾಂಡರ್-ಇನ್-ಚೀಫ್ ಆಗಿ ನೇಮಕ ಮಾಡಲಾಯಿತು (1862-63). ಅನಂತರ 1870ರಲ್ಲಿ ಅಲ್ಡರ್‍ಶಾಟ್ ಕ್ಯಾಂಪಿನಲ್ಲಿಯೂ ಈತ ಮುಂದಾಳಾಗಿದ್ದ. ಈ ಕಾಲದಲ್ಲಿ ಇವನು ಇಡೀ ಬ್ರಿಟಿಷ್ ಸೈನ್ಯಕ್ಕೆ ಒಂದು ಹೊಸತಿರುವನ್ನು ಕೊಟ್ಟನಲ್ಲದೆ, ವಿದೇಶಗಳೊಂದಿಗೆ ಯುದ್ಧಮಾಡುವ ಕಲೆಯನ್ನು ಸೈನ್ಯದಲ್ಲಿ ಜಾರಿಗೊಳಿಸಿದ. ಇವನು ಸತ್ಯಸಂಧ ಮತ್ತು ನ್ಯಾಯನಿಷ್ಠ ಸೈನ್ಯಾಧಿಕಾರಿಯಾಗಿದ್ದ. ಮರಣದಂಡನೆ ಯನ್ನು ನಿಷೇಧಿಸಲು ಪ್ರಯತ್ನಪಟ್ಟ. ಇವನು ಅಲ್ಡರ್‍ಶಾಟ್‍ನಲ್ಲಿ ಸೈನಿಕ ಶಿಕ್ಷಣದ ಮೇಲೆ ಮಾಡಿದ ಅನೇಕ ಉಪನ್ಯಾಸಗಳು ಮೌಲ್ಯಯುತವಾಗಿವೆ. ಧರ್ಮದಲ್ಲಿ ಅಚಲ ನಂಬಿಕೆ ಇಟ್ಟಿದ್ದ ಇವನು ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಸಹಾಯ ಮಾಡಿದ. ಇವನಲ್ಲಿ ಅಸೂಯೆ ಇರಲಿಲ್ಲ. ತನ್ನ ಅಧೀನದಲ್ಲಿದ್ದ ಲಾರ್ಡ್ ವೂಸ್ಲಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರಲ್ಲಿ ಮೊದಲಿಗ. ಈತ 1875 ಮಾರ್ಚ್ 7ರಂದು ನಿಧನನಾದ.
											(ಎಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ